Categories
ಭಕ್ತಿ ಮಾಹಿತಿ ಸಂಗ್ರಹ

ಗಾಳಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮೂರ್ತಿ ಪತ್ತೆ- ಹನುಮಂತನನ್ನು ನೋಡಲು ಮುಗಿಬಿದ್ದ ಜನತೆ

ನಗರದ ಮೈಸೂರು ರಸ್ತೆಯಲ್ಲಿರೋ ಗಾಳಿ ಆಂಜನೇಯ ದೇವಸ್ಥಾನದ ಬಳಿ ಹನುಮಂತನ ವಿಗ್ರಹವೊಂದು ಪತ್ತೆಯಾಗಿದ್ದು, ಇದೀಗ ಆ ಮೂರ್ತಿಯನ್ನು ನೋಡಲು ಜನ ಮುಗಿಬಿದ್ದಿದ್ದಾರೆ.

ರಾಜಕಾಲುವೆ ಸ್ವಚ್ಛತೆಯ ವೇಳೆ ಈ ಮೂರ್ತಿ ಪತ್ತೆಯಾಗಿದೆ. ಬೆಳಗ್ಗೆ 11 ಗಂಟೆ ಸುಮಾರಿಗೆ ವಿಗ್ರಹ ಕಾಣಿಸಿಕೊಂಡಿದ್ದು, ಕೂಡಲೇ ರಾಜಕಾಲುವೆ ಸ್ವಚ್ಛತೆ ಸಿಬ್ಬಂದಿ ಅದನ್ನು ರಸ್ತೆಬದಿಯಿಟ್ಟಿದ್ದಾರೆ. ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಸ್ಥಳದಲ್ಲಿ ಸ್ಥಳೀಯರು ಜಮಾಯಿಸಿ ಪೂಜೆ ಸಲ್ಲಿಸಿದ್ದಾರೆ.

ಬಿಬಿಎಂಪಿಯವರು ಮೋರಿ ಕ್ಲೀನ್ ಮಾಡುತ್ತಿದ್ದ ಸಂದರ್ಭದಲ್ಲಿ ವಿಗ್ರಹ ಸಿಕ್ಕಿದೆ. ಬಳಿಕ ಅವರು ಆ ಮೂರ್ತಿಯನ್ನು ತೊಳೆದು ರಸ್ತೆ ಬದಿಯಲ್ಲಿಟ್ಟಿದ್ದಾರೆ. ನಂತರ ನಾವು ಅದಕ್ಕೆ ಪೂಜೆ ಸಲ್ಲಿಸಿದ್ದೇವೆ.

ಹೀಗಾಗಿ ಇಲ್ಲಿ ದೇವಸ್ಥಾನ ಕಟ್ಟಬೇಕು. ಇಲ್ಲವೆಂದಲ್ಲಿ ನಾವೆಲ್ಲಾ ಸೇರಿ ಚಿಕ್ಕದಾದ ಒಂದು ದೇವಸ್ಥಾನವನ್ನು ಕಟ್ಟಿಯೇ ಕಟ್ಟುತ್ತೇವೆ ಅಂತ ಸ್ಥಳೀಯ ನಿವಾಸಿಯೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.

ಶನಿವಾರವೇ ಮೂರ್ತಿ ಸಿಕ್ಕಿದ ಕಾರಣ ಇಲ್ಲಿ ದೇವಸ್ಥಾನವನ್ನು ಕಟ್ಟಬೇಕು. ಯಾಕಂದ್ರೆ ಈ ಪ್ರದೇಶದಲ್ಲಿ ಯಾವುದೇ ದೇವಸ್ಥಾನವಿಲ್ಲ. ಹೀಗಾಗಿ ಇಲ್ಲೊಂದು ದೇವಸ್ಥಾನವನ್ನು ಕಟ್ಟಿದ್ರೆ ಎಲ್ಲರಿಗೂ ಅನುಕೂಲವಾಗುತ್ತದೆ .

ಅಂತ ಮಹಿಳೆಯೊಬ್ಬರು ಶಾಸಕರು ಹಾಗೂ ಸ್ಥಳೀಯ ರಾಜಕೀಯ ಮುಖಂಡರಲ್ಲಿ ಆಗ್ರಹಿಸಿದ್ದಾರೆ. ಶನಿವಾರ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ್ರೆ ಶನಿ ಗ್ರಹದ ದೋಷಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆ ಇದೆ.

ಗಾಳಿ ಆಂಜನೇಯ ಸ್ವಾಮಿ ಮಹಿಮೆ ಗೊತ್ತಾ?

ಬೆಂಗಳೂರು ಮಹಾನಗರದ ಮೈಸೂರು ರಸ್ತೆಯಲ್ಲಿರುವ ಪ್ರತಿಷ್ಠಿತ ದೇವಲಾಯಗಳಲ್ಲಿ ಶ್ರೀ ಗಾಳಿ ಆಂಜನೇಯ ದೇವಸ್ಥಾನವೂ ಒಂದು. ಮಾರುತಿ, ಪವನಪುತ್ರ, ಸುಂದರ, ವಾಯುಪುತ್ರ, ರಾಮಪ್ರಿಯ, ಹನುಮ, ಹನುಮಂತ ಕೇಸರಿ ಎಂಬ ನಾನಾ ಹೆಸರುಗಳಿಂದ ಕರೆಯಲ್ಪಡುವ ಹನುಮಂತ ವಾಯುಪುತ್ರನಾಗಿರುವುದರಿಂದ ಇಲ್ಲಿನ ಹನುಮ ದೇವಸ್ಥಾನಕ್ಕೆ ಗಾಳಿ ಆಂಜನೇಯ ಎಂಬ ಹೆಸರು ಬಂದಿದೆ. ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆಯೆಂದು ಹನುಮಂತನನ್ನು ಭಕ್ತಿಯಿಂದ ದಿನನಿತ್ಯ ಪೂಜಿಸಲಾಗುತ್ತದೆ.

ಈ ದೇವಾಲಯವನ್ನು ಚೆನ್ನಪಟ್ಟಣದ ಶ್ರೀ ವ್ಯಾಸರಾಯರು 1425ರಲ್ಲಿ ಕಟ್ಟಿಸಿದ್ದರು ಎಂದು ಹೇಳಲಾಗುತ್ತಿದೆ. ದೇವಾಲಯದ ಮುಂದೆ ಸುಂದರ ಹಾಗೂ ಎತ್ತರವಾದ ಗೋಪುರವಿದೆ. ಈ ಕಲ್ಲು ಗೋಪುರದಲ್ಲಿ ಹಲವಾರು ದೇವತೆ ಹಾಗೂ ಮುದ್ರೆಗಳುಳ್ಳ ಉಬ್ಬು ಶಿಲ್ಪಗಳಿವೆ. ದೇವಾಲಯಕ್ಕೆ ಭವ್ಯವಾದ ಗೋಪುರವಿದ್ದು, ಒಳ ಪ್ರಾಕಾರದಲ್ಲಿಯೂ ವಿಶಾಲವಾದ ಗುಡಿಯಾಗಿದೆ. ಇಲ್ಲಿ ನವಗ್ರಹ, ಸತ್ಯನಾರಾಯಣ ಹಾಗೂ ಸೀತಾ ಲಕ್ಷ್ಮಣ ಸಹಿತನಾದ ಕಲ್ಯಾಣ ರಾಮನನ್ನು ಪ್ರತಿಷ್ಠಾಪಿಸಲಾಗಿದೆ. ವರ್ಷದಲ್ಲಿ ಎರಡು ಬಾರಿ ಇಲ್ಲಿ ಸ್ವಾಮಿಗೋ ಬ್ರಹ್ಮೋತ್ಸವ ಜರುಗುತ್ತದೆ. ಈ ಬ್ರಹ್ಮೋತ್ಸವನ್ನು 120 ವರ್ಷಗಳಿಂದಲೂ ನಡೆಸಿಕೊಂಡು ಬರಲಾಗುತ್ತಿದೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಈ ಮೊದಲು ಹಳ್ಳಿಗಳಿದ್ದವು. ಬೆಂಗಳೂರು ನಗರ ನಿರ್ಮಾಣಕ್ಕೂ ಮುನ್ನ ಇಲ್ಲಿ ದೇವಾಲಯವಿತ್ತು ಎಂಬುದನ್ನು ಈ ದೇವಾಲಯದ ಗರ್ಭಗೃಹದ ರಚನೆಯೇ ಸಾರುತ್ತದೆ. ಈ ಪ್ರದೇಶಕ್ಕೆ ಬ್ಯಾಟರಾಯನಪುರ ಎಂದು ಹೆಸರು ಬರಲು ಇಲ್ಲಿರುವ ರುಕ್ಮಿಣಿ, ಸತ್ಯಭಾಮಾ ಸಮೇತನಾದ ವೇಣುಗೋಪಾಲಸ್ವಾಮಿ ಕಾರಣವಂತೆ.ದೇವಾಲಯದಲ್ಲಿ ಪುರಾತನವಾದ ಗರ್ಭಗುಡಿಯಲ್ಲಿ ಒಂದು ಕರವನ್ನು ಮೇಲೆತ್ತಿ ಅಭಯ ನೀಡುತ್ತಿರುವ ಮತ್ತು ಮತ್ತೊಂದು ಕರದಲ್ಲಿ ಗದೆ ಹಿಡಿದ ಎದುರು ಮುಖದ ಆಂಜನೇಯನ ಸುಂದರ ಮೂರ್ತಿಯಿದೆ.

ಬಾಪೂಜಿನಗರಕ್ಕೆ ಸಂಪ್ರದಾಯದ ಸೊಗಡಿದೆ. ನಗರದ ಆಧುನಿಕತೆಗೆ ತೆರೆದುಕೊಂಡಿರುವ ಈ ಬಡಾವಣೆಯು ಬ್ರಹ್ಮೋತ್ಸವದ ವೇಳೆ ಹಳ್ಳಿಯ ವಾತಾವರಣಕ್ಕೆ ತಿರುಗುತ್ತದೆ. ವಾಹನದಟ್ಟಣೆ, ಏರುತ್ತಿರುವ ಜನಸಂಖ್ಯೆಯ ಹೊರತಾಗಿಯೂ ಅದು ಉಸಿರಾಡುವುದು ತನ್ನತನವನ್ನು. ಉಸಿರು ಎನ್ನಲು ಕಾರಣ ಅಲ್ಲಿನ ಗಾಳಿ ಆಂಜನೇಯ ಸ್ವಾಮಿ.ಈ ದೇವಾಲಯಕ್ಕೆ ಇದಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಇಲ್ಲಿ ನಿರಂತರವಾಗಿ ಸಾವಿರಾರು ಭಕ್ತಾದಿಗಳು ಪೂಜೆ ಸಲ್ಲಿಸುತ್ತಾರೆ.

ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿನ ಕಷ್ಟಗಳು ದೂರಾಗುತ್ತವೆ ಹಾಗೂ ಮನೆಯಲ್ಲಿ ದುಷ್ಟಶಕ್ತಿಗಳು ಸುಳಿಯುವುದಿಲ್ಲ, ಮಕ್ಕಳು ಚಂಡಿ ಹಿಡಿದರೆ ದೇವಸ್ಥಾನಕ್ಕೆ ಭೇಟಿ ನೀಡಿ ತಾಯತ ಹಾಕಿಸಿಕೊಳ್ಳುವುದರಿಂದ ಮಕ್ಕಳಲ್ಲಿರುವ ಗೊಂದಲ ಹಾಗೂ ತೊಂದರೆಗಳು ಇಲ್ಲವಾದಂತೆ ಆಗುತ್ತದೆ. ಈ ಆಂಜನೇಯನನ್ನು ಪ್ರಾರ್ಥಿಸುವುದರಿಂದ ಗಾಳಿ ಹಿಡಿಯುವುದು ಅಂದರೆ ಭೂತ ಪಿಶಾಚಿಗಳ ಮುಷ್ಟಿಗೆ ಒಳಪಡುವುದರಿಂದ ಮುಕ್ತಿ ಪಡೆಯಬಹುದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ.

ವಾಹನ, ಮನೆಯ ಮೇಲೆ ಬೀಳುವ ದೃಷ್ಟಿಯನ್ನು ಗಾಳಿ ಆಂಜನೇಯ ಸ್ವಾಮಿ ದೂರ ಮಾಡುತ್ತಾನೆಂಬ ನಂಬಿಕೆಯಿಂದಲೇ ಪ್ರತೀ ನಿತ್ಯ ಇಲ್ಲಿನ ಜನ ನೂರಾರು ಸಂಖ್ಯೆಯಲ್ಲಿ ಬಂದು ತಮ್ಮ ವಾಹನಗಳಿಗೆ ಪೂಜೆ ಮಾಡಿಸುತ್ತಾರೆ. ದೇವರಿಗೆ ಪೂಜೆ ಮಾಡಿಸಿ ಇಲ್ಲಿ ನೀಡುವ ಆಂಜನೇಯ ಸ್ವಾಮಿ ಬಂಡಾರ ಹಾಗೂ ಫಲವನ್ನು ಮನೆಗೆ ತೆಗೆದುಕೊಂಡು ಹೋಗಿ ಮನೆಯ ಇತರೆ ಸದಸ್ಯರಿಗೆ ನೀಡುತ್ತಾರೆ. ಇದಲ್ಲದೆ ಇಲ್ಲಿಗೆ ಬರುವ ಜನರು ತಮ್ಮ ಕಷ್ಟವನ್ನು ದೂರಮಾಡುವಂತೆ ಹರಕೆ ಹೊತ್ತು, ಬಯಕೆ ಈಡೇರಿದ ಮೇಲೆ ಹರಕೆಯನ್ನು ತೀರಿಸುತ್ತಾರೆ.

ದುಷ್ಟಶಕ್ತಿ ಸಂಹಾರಕ ಗಾಳಿ ಆಂಜನೇಯ

ಬೆಂಗಳೂರು ನಗರ ಉದಯಿಸುವ ಮುನ್ನ ಸ್ವಾಮಿಯ ಮೂರ್ತಿ ಬಯಲಿನಲ್ಲಿ ಇದ್ದ ಕಾರಣ ‘ಗಾಳಿ’ ಆಂಜನೇಯ ಎಂಬ ಹೆಸರು ಬಂದಿದೆ. ‘ಘಾಳಿ’ ಆಂಜನೇಯ ಎಂಬ ಹೆಸರೂ ಇದೆ. ‘ಘಾಳಿ’ ಎಂದರೆ ದುಷ್ಟ ಶಕ್ತಿ ಎಂದರ್ಥ. ದುಷ್ಟ ಶಕ್ತಿಗಳ ಅಧಿಪತಿಯಾದ ರಾವಣನ ಪುತ್ರ ಅಕ್ಷಾಸುರನನ್ನು ಮೆಟ್ಟಿ ನಿಂತಿದ್ದರಿಂದ ಈ ಹೆಸರು ಬಂದಿದೆ. ಅಕ್ಷಾಸುರನ ಜಿತಾವಣೆಯಿಂದ ಭೂ ಲೋಕದಲ್ಲಿ ದೆವ್ವ, ಭೂತ ಚೇಷ್ಟೆಗಳು ಮಿತಿ ಮೀರಿದ್ದವಂತೆ. ಆಗ ಶ್ರೀ ರಾಮಚಂದ್ರನ ಆಣತಿಯಂತೆ ಹನುಮಂತ, ಅಕ್ಷಾಸುರನನ್ನು ಸದೆಬಡಿದು ಕಾಲಿನಡಿ ಮೆಟ್ಟಿ ನಿಂತ ಎಂದು ರಾಮಾಯಣದಲ್ಲಿ ಉಲ್ಲೇಖವಿದೆ. ದೇವಾಲಯದ ಪೂಜಾ ಮೂರ್ತಿಯೂ ಇದೇ ಕತೆಯನ್ನು ಸಾರಿ ಹೇಳುವಂತಿದೆ. ಮೂರ್ತಿಯ ಶಿರದ ಎರಡೂ ಬದಿಯಲ್ಲಿ ಶಂಖ, ಚಕ್ರಗಳಿವೆ. ಸ್ವಾಮಿಯ ಬಾಲದಲ್ಲಿ ಗಂಟೆ ಇರುವುದು ಮತ್ತೊಂದು ವಿಶೇಷ. ಆಂಜನೇಯನ ಬಹುತೇಕ ಬಹುತೇಕ ವಿಗ್ರಹಗಳಲ್ಲಿ ಕೈಯಲ್ಲಿ ಗದೆ ಇರುತ್ತದೆ, ಆದರೆ ಇಲ್ಲಿ ಪದ್ಮಕಮಲವಿರುವುದು ಮತ್ತೊಂದು ವಿಶೇಷತೆಯಾಗಿದೆ.

ಆಂಜನೇಯನ ಬಹುತೇಕ ದೇಗುಲದಲ್ಲಿ ಮೂರ್ತಿಯ ಮುಖಕ್ಕೆ ಮಾತ್ರ ಸಿಂಧೂರ (ಭಂಡಾರ) ಲೇಪಿಸಲಾಗಿರುತ್ತದೆ. ಆದರೆ ಇಲ್ಲಿ ಪ್ರತಿ ಗುರುವಾರ ಸ್ವಾಮಿಯ ಇಡೀ ಮೈಗೆ ಸಿಂಧೂರ ಲೇಪಿಸಿ ಪೂಜೆ ಮಾಡಲಾಗುತ್ತದೆ. ಉಳಿದಂತೆ ಪ್ರತಿ ಮಂಗಳವಾರ ಮತ್ತು ಶನಿವಾರ ವಿಶೇಷ ಪೂಜೆ ನಡೆಯುತ್ತದೆ.